ಭಾರತದ ಯಾವುದೇ ಪತ್ರಕರ್ತರಿಗೆ ಕಾಶ್ಮೀರ ದ ಬಗ್ಗೆ ಒಂದಿಷ್ಟು ಕುತೂಹಲ ಸಹಜ . ಭಾರತ ಪಾಕಿಸ್ತಾನ ಹಾಗೂ ಚೈನಾ ಮೂರು ಪರಮಾಣು ರಾಷ್ಟ್ರಗಳ ನಡುವೆ ಸುತ್ತುವರಿದ ಕಷ್ಯಪನಿಂದ ನಿರ್ಮಿತ ಕಾಶ್ಮೀರ ಕಣಿವೆ ನಾವು ಪತ್ರಿಕೆಗಳನ್ನು ಓದಲು ಆರಂಭಿಸ್ದಾಗಿನಿಂದ ಬಹುತೇಕ ದಿನವು ಮುಖಪುಟದಲ್ಲಿ ಕಾಣಸಿಗುವ ಹೆಸರು .
೧೯೮೯ ರಲ್ಲಿ ನಾವು ಸ್ಕೂಲ್ ಗೆ ಹೋಗುವಾಗಲೇ ಕಾಶ್ಮೀರ ಹೊತ್ತಿ ಉರಿಯತೊದಗಿತ್ತು . ಮುಫ್ತಿ ಪುತ್ರಿ ರುಬಿಯಾ ಅಪಹರಣ, ಪ್ರಕರಣ ಹಜರತ್ ಬಾಲ ನಲ್ಲಿ ಉಗ್ರರು ಅವಿತುಕೊಂಡ ಘಟನೆ ಚರಾರ್ ಏ ಷರೀಫ್ ಅನ್ನು ಸಂಪೂರ್ಣವಾಗಿ ಸುಟ್ಟು ಹಾಕಿದ ನಂತರ ಪಾಕಿ ಉಗ್ರ ಗುಲ್ ನನ್ನು ಪಾಕಿಸ್ತಾನದ ಮುಝಾಫರಾಬಾದ್ ನಲ್ಲಿ ಮೆರವಣಿಗೆ ಮಾಡಿ ಸ್ವಾಗತಿಸಿದ ಘಟನೆ ,ಅಮರನಾಥ್ ಯಾತ್ರಿಗಳ ಮೇಲಿನ ದಾಳಿ, ಜಮ್ಮು ಕಾಶ್ಮೀರ ವಿಧಾನ ಸಭೆಯ ಮೇಲಿನ ಆತ್ಮಹತ್ಯಾ ದಾಳಿಯಿಂದ ಹಿಡಿದು ಕಳೆದ ವಾರ ಪ್ರಧಾನಿ ಭೇಟಿಯ ಹಿಂದಿನ ದಿನ ನಡೆದ ಸೈನಿಕರ ಮೇಲಿನ ದಾಳಿ ಹೀಗೆ ಇನ್ನುವರೆಗೂ ಕಾಶ್ಮೀರ ಅಂದರೆ ದೂರದಿಂದ ಗಮನಿಸುತ್ತಿದ್ದ ನಮಗೆಲ್ಲ ಉಗ್ರರ ಚಟುವಟಿಕೆಯ ತಾಣ .
ನಾನು ಶಾಲೆಗೇ ಹೋಗುತ್ತಿದ್ದಾಗ ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ಶ್ರೀನಗರದ ಲಾಲ್ ಚೌಕ್ ನಲ್ಲಿ ಉಗ್ರರ ಸವಾಲು ಸ್ವೀಕರಿಸಿ ರಾಷ್ಟ್ರ ಧ್ವಜ ಹಾರಿಸಲು ಹೊರಟಿದ್ದರು ಆಗ ಜೋಷಿ ಅವರನ್ನು ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಈದಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಹೊರಟಿದ್ದ ಕೆಲ ಯುವಕರನ್ನು ಪೊಲೀಸರು ಬಂಧಿಸಿದಾಗಿನಿಂದ ಕಾಶ್ಮೀರ ಲಾಲ್ ಚೌಕ್ ಜಿಹಾದ್ ಜಮ್ಮು ಕಾಶ್ಮೀರ ಲಿಬೇರೆಶನ್ ಫ್ರಂಟ್ ಶೇಕ್ ಅಬ್ದುಲ್ಲಾ ಪಾಕ್ ಆಕ್ರಮಿತ ಕಾಶ್ಮೀರದ ಕ್ಯಾಂಪ್ ಗಳು ಆರ್ಟಿಕಲ್ ೩ ೭ ೦ ರ ಬಗ್ಗೆ ಕೇಳಿ ಗಮನಿಸಿ ಓದಿಕೊಂಡಿದ್ದ ನಾನು ಕಳೆದ ವಾರ ಕಾಶ್ಮೀರ ಕ್ಕೆ ಹೋಗಿದ್ದೆ .
ನಾನು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವತ್ತು ಪ್ರಧಾನಿ ಹಾಗು ಸೋನಿಯಾ ಗಾಂಧೀ ಕಾಶ್ಮೀರಕ್ಕೆ ಭೇಟಿ ನೀಡಿದ್ದರು . ವಿಮಾನ ನಿಲ್ದಾಣದ ಅಂಗಡಿಗಳಿಂದ ಹಿಡಿದು ದಲ್ ಸರೋವರದ ವರೆಗೂ ಎಲ್ಲವೂ ಬಂದ್ . ಒಂದು ಕಡೆ ದೇಶದ ಪ್ರಧಾನಿ ಕಾಶ್ಮೀರಕ್ಕೆ ಹಣದ ಸುರಿಮಳೆ ಮಾಡುತ್ತಿದ್ದರೆ ಇನ್ನೊಂದು ಕಡೆ ಕಾಶ್ಮೀರದ ಜನತೆ ಪರಂಪರೆಯೇನೋ ಎಂಬಂತೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ''ಅಜಾದಿ '' ಜಪ ಮಾಡುತ್ತಿದ್ದರು . ಶ್ರೀನಗರದ ಹೆಜ್ಜೆ ಹೆಜ್ಜೆಗೂ ಕಾಶ್ಮೀರದ ಪೊಲೀಸರು ರಾಷ್ಟ್ರೀಯ ರೈಫ಼ಲ್ಸ್ ಜವಾನರು ಗಡಿ ಭದ್ರತಾ ಪಡೆಯ ಯೋಧರು ಸಿ ಆರ್ ಪಿ ಎಫ್ ತುಕಡಿಗಳು ಸುತ್ತುವರೆದು ಪ್ರಧಾನಿ ಪ್ರವಾಸಕ್ಕೆ ಭದ್ರತೆ ಒದಗಿಸಿದ್ದರೆ ಶ್ರೀನಗರದ ಜನತೆ ಮಾತ್ರ ಯಾರೋ ಶತ್ರು ರಾಷ್ಟ್ರದ ಮುಖ್ಯಸ್ಥ ಬಂದ ರೀತಿಯಲ್ಲಿ ವ್ಯವಹಾರ ಮಾಡುತ್ತಿದ್ದರು . ೯ ವರ್ಷದ ಹಿಂದೆ ಕಾಶ್ಮೀರಕ್ಕೆ ಪ್ರಧಾನಿ ಮನ ಮೋಹನ್ ಸಿಂಗ್ ನೀಡಿದ್ದು ಬರೋಬ್ಬರಿ ೩ ೭ ಸಾವಿರ ಕೋಟಿ ಪ್ಯಾಕೇಜ್ . ಆದರೆ ಕಾಶ್ಮೀರದ ಜನತೆ ಒಬ್ಬ ದೇಶದ ಪ್ರಧಾನಿಯನ್ನು ಸ್ವಾಗತಿಸಿದ್ದು ಮಾತ್ರ ಈಡಿ ಕಣಿವೆಯನ್ನು ಬಂದ್ ಮಾಡುವುದರ ಮೂಲಕ .
ನಮ್ಮನ್ನು ಶ್ರೀನಗರದ ವಿಮಾನ ನಿಲ್ದಾಣದಿಂದ ಹೋಟೆಲ್ ವರೆಗೆ ಕರೆದುಕೊಂಡು ಬಂದ ಚಾಲಕ ಶೌಕತ್ ಪ್ರಧಾನಿ ಹಾಗು ಸೋನಿಯಾ ಗಾಂಧೀ ಹೆಸರಿಗೆ ಹಿಡಿ ಶಾಪ ಹಾಕುತ್ತಿದ್ದ .'' ಕಾಶ್ಮೀರ ನಲ್ಲಿ ಸೇನೆ ಕಾರ್ಯಾಚರಣೆಗೆ ನೀಡಿದ ವಿಶೇಷ ಕಾನೂನು ಹಿಂದೆ ತೆಗೆದುಕೊಳ್ಳುವವರೆಗೆ ಕಾಶ್ಮೀರದ ಜನತೆ ದೆಹಲಿಯನ್ನು ನಂಬುವುದಿಲ್ಲ . ಒಂದು ಕಡೆ ೧೫ ರಿಂದ ೨೦ ವರ್ಷದ ಯುವಕರ ಮೇಲೆ ದಿನವು ಗುಂಡು ಹಾರಿಸಿ ನಂತರ ಇಂಥ ಪ್ಯಾಕೇಜ್ ಗಳನ್ನೂ ನೀಡಿದರೆ ಏನು ಅರ್ಥ ? ನಿಮ್ಮ ದೆಹಲಿ ನಮ್ಮ ಯುವಕರನ್ನು ಇರುವೆಗಳಂತೆ ಹೊಸಕಿ ಹಾಕುತ್ತದೆ ''ಎಂದು ಹೇಳುತ್ತಾ ಸುಮಾರು ೨೦ ಕಿಲೋ ಮೀಟರ್ ಸುತ್ತು ಹಾಕಿ ನಮ್ಮನ್ನು ಹೇಗೋ ಹೋಟೆಲ್ ಗೆ ತಂದು ಬಿಟ್ಟ . ಇವತ್ತು ಎಲ್ಲಿಯೂ ಹೊರಗೆ ಹೋಗಬೇಡಿ ನಾಳೆ ಪ್ರಧಾನಿ ಶ್ರೀನಗರದಿಂದ ದೆಹಲಿಗೆ ಹಾರಿದ ಮೇಲೆ ಎಲ್ಲವೂ ನಾರ್ಮಲ್ ಆಗುತ್ತದೆ . ಹೋಟೆಲ್ ರೂಂ ನಲ್ಲೆ ಇರಿ ಕೆಹೆವಾ ಚಾಯ್ ಕುಡಿಯಲು ಮರೆಯಬೇಡಿ ಎಂದು ಹೇಳಿ ಹೊರತು ಹೋದ .
ಕೆಹೆವಾ ಛಾಯ ಕಾಶ್ಮೀರದ ಜನಪ್ರಿಯ ಚಹಾ . ಗ್ರೀನ್ ಟೀ ಗೆ ದಾಲ್ ಚೀನಿ ಇಲಾಚಿ ಸೇರಿಸಿ ನಂತರ ಕಾಶ್ಮಿರದಲ್ಲೇ ಬೆಳೆಯಲಾಗುವ ಕೇಸರ್ ಸೇರಿಸಿದರೆ ತಯಾರಾಗುವ ಚಹಾ ಕಾಶ್ಮೀರದ ಪ್ರಸಿದ್ಧ ಕೇಹೆವಾ ಚಾಯ್ . ಹೆಚ್ಚು ಚಳಿ ಇರುವ ಕಾಶ್ಮೀರ ಕಣಿವೆಯಲ್ಲಿ ಬೆಚ್ಚಗಿನ ಕಲರ್ ಫುಲ್ ಪ್ಹೆರನ್ ಬಟ್ಟೆ ಧರಿಸಿ ''ಕಾಂಗಡಿ ''ಎಂಬ ಇದ್ದಿಲು ಹಾಕಿ ಕಾಯಿಸಿಕೊಳ್ಳುವ ಕಟ್ಟಿಗೆಯ ಬುಟ್ಟಿ ಕೈಯಲ್ಲಿ ಹಿಡಿದು ಕೆಹೆವಾ ಚಾಯ್ ಕುಡಿಯುತ್ತ ಆಕಾಶದ ಕಡೆ ನೋಡುತ್ತಾ ಕೂರುವುದೇ ಕಾಶ್ಮೀರಿಗರ ಇಷ್ಟದ ಟೈಮ್ ಪಾಸು .
ಹಾಗೆ ತುಲನಾತ್ಮಕವಾಗಿ ನೋಡಿದರೆ ೯೦ ದಶಕದಲ್ಲಿ ಉಗ್ರರ ಚಟುವಟಿಕೆಗಳಿಂದ ನಲುಗಿದ ಕಾಶ್ಮೀರ ಈಗ ಹೆಚ್ಚು ಶಾಂತವಾಗಿದೆ . ದಿನಕ್ಕೊಂದರಂತೆ ನಡೆಯುತ್ತಿದ್ದ ಉಗ್ರರ ಅಟ್ಟಹಾಸಗಳ ಸಂಖ್ಯೆ ಕಡಿಮೆಯಾಗಿದೆ . ವಿಶ್ವದ ಪ್ರಸಿದ್ಧ ಪ್ರವಾಸಿ ತಾಣ ಮತ್ತೆ ಯಾತ್ರಿ ಗಳಿಂದ ತುಂಬಿ ತುಳುಕುತ್ತಿದೆ . ಕಳೆದ ವರ್ಷ ಸುಮಾರು ೧೫ ಲಕ್ಷ್ಯ ಪ್ರವಾಸಿಗರು ಶ್ರೀನಗರಕ್ಕೆ ಬಂದು ಹೋಗಿದ್ದಾರೆ . ೧೯೮ ೯ ರಲ್ಲಿ ಜೆ ಕೆ ಎಲ್ ಎಫ್ ಉಗ್ರರು ಕಾಶ್ಮೀರದ ಪೋಲಿಸ ಮಹಾನಿರ್ದೇಶಕನನ್ನು ಹತ್ಯೆಗೈದ ನಂತರ ಸುಮಾರು ೧೮ ವರ್ಷ ಹತೋಟಿ ಮೀರಿ ನಡೆದ ಘಟನೆಗಳು ಈಗ ನಿಧಾನವಾಗಿ ಇಳಿಕೆಯಾಗುತ್ತಿವೆ . ಭಯೋತ್ಪಾದನೆ ಮತ್ತು ಪ್ರವಾಸೋದ್ಯಮ ಎರಡು ಕೂಡ ನೇರವಾಗಿ ಸಂಬಂಧ ಪಡುವುದರಿಂದ ಸ್ಥಳೀಯ ಜನತೆ ಪ್ರವಾಸೋದ್ಯಮವನ್ನು ಆಯ್ದುಕೊಳ್ಳುತ್ತಿದ್ದಾರೆ . ಇದು ಅಲ್ಲಿನ ಜನರಿಗೆ ದೆಹಲಿಯ ಮೇಲೆ ಪ್ರೀತಿ ಉಂಟಾಗಿದೆ ಎಂದು ಅರ್ಥವಲ್ಲ ಆದರೆ ಭಾರತ ಎಷ್ಟು ಅನಿವಾರ್ಯ ಎಂಬುದು ಅರ್ಥಿಕ ಕಾರಣಗಳಿಂದ ನಿಧಾನವಾಗಿ ಅರ್ಥವಾಗುತ್ತಿದೆ .
ದಾಲ್ ಲೇಕ ನಲ್ಲಿ ಸಂಜೆ ಶಾಲ್ ಗಳನ್ನೂ ಮಾರುವ ಆದಿಲ್ ಖಾನ್ ''ಸುಮಾರು ೨೪ ವರ್ಷಗಳ ನಿರಂತರ ಭದ್ರತಾ ಪಡೆಗಳ ಜೊತೆಗಿನ ಕಾದಾಟದ ನಂತರ ನಾವು ದಣಿದಿದ್ದೇವೆ . ಸುಮಾರು ೨ ಲಕ್ಷ್ಯ ಯುವಕರನ್ನು ಕಾಶ್ಮೀರ ಕಳೆದುಕೊಂಡಿದೆ . ಇದೊಂದು ವಿಷ ಚಕ್ರ . ಮೊದಲು ನಾವು ಶಸ್ತ್ರ ಹಿಡಿದೆವು ಪರಿಣಾಮ ಬಂದಿದ್ದು ವಿಶಾಲ ಭಾರತೀಯ ಸೇನೆ . ನಮ್ಮವರು ಒಂದು ದಾಳಿ ನಡೆಸಿದರೆ ನಂತರ ಸೇನೆಯವರು ಹತ್ತು ಪ್ರತಿ ದಾಳಿ ನಡೆಸುತ್ತಾರೆ . ನಮ್ಮ ಕುಟುಂಬ ಮಹಿಳೆಯರು ಮಕ್ಕಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ . ಇನ್ನು ಹೀಗೆಯೇ ದಾಳಿ ಪ್ರತಿ ದಾಳಿಯ ಚಕ್ರದಲ್ಲಿ ಸಿಲುಕಿದರೆ ತಿನ್ನುವುದು ಏನು ? ಹಿಂಸಾಚಾರದ ಘಟನೆಗಳು ನಡೆಯುತ್ತಲೇ ಇದ್ದರೆ ವಿದೇಶಿ ಪ್ರವಾಸಿಗರು ಹೋಗಲಿ ನಿಮ್ಮ ದೆಹಲಿಯವರೇ ಇಲ್ಲಿ ಬರುವುದಿಲ್ಲ . ನಮ್ಮ ಉತ್ಪನ್ನದ ಮೂಲವೇ ಪ್ರವಾಸೋದ್ಯಮ ಹೀಗಾಗಿ ಸ್ಥಳಿಯರು ಈಗ ಉಗ್ರರಿಗೆ ಸಹಕಾರ ನೀಡುವುದಿಲ್ಲ . ಬೆಂಬಲ ಇಲ್ಲ ಎಂದು ಇದರ ಅರ್ಥ ಅಲ್ಲ ಆದರೆ ಸಹಕಾರ ನೀಡುವ ಸ್ಥಿತಿಯಲ್ಲಿ ನಾವಿಲ್ಲ ''ಎಂದು ಬಡಬದಾಯಿಸುತ್ತಿದ್ದ .
ಕಾಶ್ಮೀರದ ಯಾವುದೇ ಯುವಕರನ್ನು ಸ್ವಲ್ಪ ವಿಶ್ವಾಸದಿಂದ ಮಾತನಾಡಿಸಿದರೆ ಸಾಕು . ಗತಿಸಿದ ದಿನಗಳ ಕಥೆಯನ್ನೇ ಕಣ್ಣ ಮುಂದೆ ತೆರೆದಿಡುತ್ತಾರೆ . ವಿ ಪಿ ಸಿಂಗ್ ಸರ್ಕಾರದಲ್ಲಿ ಆಗ ತಾನೇ ಗ್ರಹ ಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯಿದ್ ಪುತ್ರಿಯನ್ನು ಕೆಲ ಯುವಕರು ಮೆಡಿಕಲ್ ಕಾಲೇಜ ಬಸ್ ನಿಂದ ಅಪಹರಿಸಿ ಬಂದೂಕಿನ ಮೊನೆಯ ಮೇಲೆ ಕೇಂದ್ರ ಸರ್ಕಾರವನ್ನು ತನ್ನ ಬೇಡಿಕೆಗಳಿಗೆ ಮಣಿಸುವಂತೆ ಮಾಡಿದ ಸಂಜೆ ಶ್ರೀನಗರದ ಓಲ್ಡ್ ಸಿಟಿ ಯಿಂದ ಹೊರಟ ಮೆರವಣಿಗೆ ನೋಡಿದರೆ ಮುಂಜಾನೆಯ ಸೂರ್ಯ ಉದಯಿಸುವಾಗ ನಾವು ಭಾರತದಿಂದ ಬೇರೆಯಾಗುತ್ತೇವೆ ಎಂದು ಎನಿಸಿತ್ತಂತೆ . ಒಂದು ಕಡೆ ಬಡತನ ನಿರುದ್ಯೋಗ ಇನ್ನೊಂದು ಕಡೆ ಪ್ರತ್ಯೇಕತೆಯ ಭ್ರಮೆ ಒಂದು ಕಡೆ ಪಾಕಿಸ್ತಾನದ ಹಣದ ಆಮಿಷ ಇನ್ನೊಂದು ಕಡೆ ಜಿಹಾದ್ ನ ಭ್ರಮೆ ಹೀಗೆ ಅನೇಕ ಕಾರಣಗಳಿಂದ ಬಂದೂಕು ಹಿಡಿದಿದ್ದ ಕಾಶ್ಮೀರದ ಸುಮಾರು ಒಂದೂವರೆ ಲಕ್ಷ್ಯ ಯುವಕರು ಹತರಾಗಿದ್ದಾರೆ . '' ಜಿಸ್ ಕೊ ಹೈ ಖುದಾ ಸೆ ಖೌಫ್ ಉಥಾಲೊ ಕಲಾಶ್ನಿಕೋವ್ ''ಅಂದರೆ ಅಲ್ಹಾ ನಿಗೆ ಹೆದರುವ ಯುವಕರೇ ಕಲಾಶ್ನಿಕೋವ್ ಎತ್ತಿಕೊಳ್ಳಿ ಎಂದು ಶ್ರೀನಗರದಲ್ಲಿ ಘೋಷಣೆ ಕೂಗುತ್ತಿದ್ದ ಬಹುತೇಕ ಯುವಕರು ಈಗ ಭಯೋತ್ಪಾದನೆಯ ಬಗ್ಗೆ ಭ್ರಮ ನಿರಸನ ಗೊಂಡವರಂತೆ ಮಾತನಾಡುತ್ತಾರೆ . ನಾವು ಇಳಿದುಕೊಂಡಿದ್ದ ಹೋಟೆಲ್ ನಲ್ಲಿ ಕೆಲಸ ಮಾಡುವ ಯುವಕನೊಬ್ಬ ಹೇಳಿದ ಪ್ರಕಾರ ''ಭಾರತದಿಂದ ಸ್ವಾತಂತ್ರ್ಯ ನಮ್ಮ ಕನಸು ಆದರೆ ಬಂದೂಕಿನಿಂದ ಇದು ಸಿಗುವುದಿಲ್ಲ . ಕಾಶ್ಮೀರದ ಸ್ಥಿತಿ ಅಪಘಾನಿಸ್ತಾನ ಪಾಕಿಸ್ತಾನದ ರೀತಿಯಲ್ಲಿ ಆಗಬಾರದು ಇದು ನಮ್ಮನ್ನು ಇನ್ನಷ್ಟು ನರಕಕ್ಕೆ ದೂಡುತ್ತದೆ ಮೊದಲು ನಮಗೆ ಶಾಂತಿ ಬೇಕು ಹತ್ತು ವರ್ಷಗಳ ಹಿಂದೆ ನಾವೆಲ್ಲರೂ ಕೂಡ ಬಂದೂಕು ನೋಡಿದವರೇ ಆದರೆ ಅದರಿಂದ ಏನು ಸಾಧ್ಯವಾಗುವುದಿಲ್ಲ . ಕಾಶ್ಮೀರ ಬಂದೂಕು ಬಾಂಬ್ ಗಳಿಂದ ಹೆಸರಾಗುವುದು ಬೇಡ ನಾವು ಪಷ್ಮಿನಾ ಶಹತೂಶ್ ಶಾಲ್ ಗಳಿಗಾಗಿ ವಿಶ್ವದಲ್ಲೆಡೆ ಹೆಸರು ಪಡೆದಿದ್ದೇವೆ ಅದನ್ನೇ ಮುಂದುವರೆಸಿಕೊಂಡು ಹೋಗೋಣ ಎಂದು ನಮಗೆ ಅರಿವಾಗತೊಡಗಿದೆ ''ಎಂದು ಹೇಳುತ್ತಿದ್ದ . ಈ ಯುವಕನ ಮೂರು ಬಾಲ್ಯ ಮಿತ್ರರು ಬಂದೂಕು ಹಿಡಿದು ಭದ್ರತಾ ಪಡೆಗಳ ಏನ್ ಕೌಂಟರ್ ನಲ್ಲಿ ಅಸು ನೀಗಿದ್ದಾರೆ .
ಕಾಶ್ಮೀರದ ಪಷ್ಮಿನಾ ಶಾಲ್ ವಿಶ್ವ ಪ್ರಸಿದ್ಧ . ಅಮೆರಿಕಾದ ಬಿಲ್ ಕ್ಲಿಂಟನ್ ನಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿ ವರೆಗೆ ಎಲ್ಲರೂ ಪಷ್ಮಿನಾದ ಫ್ಯಾನ್ ಗಳೇ . ಹಿಮಾಲಯದ ಎತ್ತರದಲ್ಲಿ ಇರುವ ಮೇಕೆಗಳ ಉಣ್ಣೆಯಿಂದ ತಯಾರಾಗುವ ಶಾಲ್ ಗಳು ೧೫ ಸಾವಿರ ಬೆಲೆ ಬಾಳುತ್ತವೆ . ಶಃತೂಶ್ ಎನ್ನುವ ಶಾಲ್ ತಯಾರಿಕೆಯನ್ನು ಪ್ರಾಣಿ ಹತ್ಯೆಯ ಕಾರಣದಿಂದ ಸರ್ಕಾರ ನಿಷೇಧಿಸಿದೆಯಾದರು ಈ ಶಾಲಗಳು ಇನ್ನು ಕೂಡ ಇಲ್ಲಿ ಸಿಗುತ್ತವೆ . ಉಗ್ರರ ಅತಿರೇಕದ ದಿನಗಳಲ್ಲಿ ಕೂಡ ಕಾಶ್ಮೀರದ ಆರ್ಥಿಕತೆಯನ್ನು ಕಾಪಾಡಿದ್ದು ಇದೆ ಶಾಲಗಳ ವ್ಯಾಪಾರ .
ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ರಿಗೆ ಸ್ಥಳೀಯ ಜನರಲ್ಲಿ ಒಳ್ಳೆಯ ಹೆಸರಿದೆ . ತಂದೆ ಫಾರೂಕ್ ಅಬ್ದುಲ್ಲ ರಂತೆ ವಿಲಾಸಿಯಲ್ಲದ ತುಂಬಾ ದೂರ ದ್ರಷ್ಟಿಕೊನದಿಂದ ಉಮರ್ ಮಾಡುತ್ತಿರುವ ಅಭಿವ್ರದ್ಧಿ ಕೆಲಸಗಳು ಸಾಮಾನ್ಯ ಜನರಲ್ಲಿ ಜನಪ್ರಿಯತೆ ಗಳಿಸಿವೆ . ಆದರೆ ಒಂದು ಕಾಲದಲ್ಲಿ ಶ್ರೀನಗರದಲ್ಲಿ ಹರತಾಳದ ಹುಕುಮತ್ ನಡೆಸುತ್ತಿದ್ದ ಹುರಿಯತ್ ನಾಯಕರ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಇದ್ದಂತೆ ಕಾಣುವುದಿಲ್ಲ . ಓಲ್ಡ್ ಸಿಟಿ ಯಲ್ಲಿ ಹುರಿಯತ್ ಪ್ರಾಬಲ್ಯವಿದೆಯಾದರು ಬಹುತೇಕ ಜನ ಈ ನಾಯಕರು ತಮ್ಮ ಮಕ್ಕಳನ್ನು ಅಮೇರಿಕಾದಲ್ಲಿ ಓದಿಸಿ ಇಲ್ಲಿನ ಯುವಕರನ್ನು ಸೇನೆಯ ಮೇಲೆ ಕಲ್ಲು ಹೊಡೆಯುವ ಕೆಲಸಕ್ಕೆ ಹಚ್ಚುವುದರ ಬಗ್ಗೆ ಕಿಡಿ ಕಾರುತ್ತಾರೆ . ಅರಿಫ್ ಅಹ್ಮದ್ ಎಂಬ ಪುಸ್ತಕದ ಅಂಗಡಿ ನಡೆಸುವ ವಯಸ್ಕ ಹೇಳುತ್ತಿದ್ದ ಪ್ರಕಾರ ''ಲೆಬನಾನ್ ನಲ್ಲಿ ಹೋರಾಟ ನಡೆಸುವ ನಾಯಕರು ಮೊದಲು ತಮ್ಮ ಮಕ್ಕಳಿಂದಲೇ ಹೋರಾಟ ಆರಂಭಿಸುತ್ತಾರೆ ಆದರೆ ಈ ನಾಯಕರು ನಮ್ಮ ಮಕ್ಕಳನ್ನು ಸಾಯಲು ಮುಂದೆ ಮಾಡಿ ತಮ್ಮ ಕುಟುಂಬವನ್ನು ವಿದೇಶದಲ್ಲಿ ಓದಿಸುತ್ತಾರೆ ತಾವು ಮಾತ್ರ ಹಣ ಗಳಿಸುತ್ತಾರೆ ಇದೆಂಥ ಹೋರಾಟದ ಲಕ್ಷಣ ''ಎಂದು ಹೇಳುತ್ತಿದ್ದರು .
೯ ೦ ರ ದಶಕದ ಮೊದಲು ಕಾಶ್ಮೀರದಲ್ಲಿ ೧೩ ಚಿತ್ರ ಮಂದಿರಗಳಿದ್ದವು ಆದರೆ ಈಗ ಒಂದು ನಡೆಯುವುದಿಲ್ಲ . ಉಗ್ರರು ಚಿತ್ರ ವೀಕ್ಷಣೆ ಇಸ್ಲಾಂ ಗೆ ವಿರುದ್ಧ ಎಂದು ಘೋಷಿಸಿದ ನಂತರ ಇವು ಬಾಗಿಲು ತೆರೆದಿಲ್ಲ . ಗೋಡೆಗಳ ತುಂಬೆಲ್ಲ ಚಿತ್ರಗಳ ಪೋಸ್ಟರ್ ಗಳು ಅಂಟಿಸುವ ನಗರಗಳಿಗಿಂತ ಶ್ರೀನಗರ ಭಿನ್ನ . ಇನ್ನು ಜೀನ್ಸ್ ಧಾರಿಗಳೇ ತುಂಬಿಕೊಂಡಿರುವ ಕಾಲದಲ್ಲಿ ಕಾಶ್ಮೀರದಲ್ಲಿ ಜೀನ್ಸ್ ಕಾಣ ಸಿಗುವುದಿಲ್ಲ . ಎಲ್ಲ ಮಹಿಳೆಯರು ಬುರ್ಖಾ ಹಾಕಿಕೊಳ್ಳುವುಡಿಲ್ಲವಾದರು ಕೂಡ ತಲೆಗೆ ಸ್ಕಾರ್ಫ್ ಹಾಕಿ ಓಡಾಡುವುದು ಕಡ್ಡಾಯ . ಇನ್ನು ಕಾಶ್ಮೀರಿ ಯುವತಿಯರ ಸ್ನಿಗ್ಧ ಅಪರೂಪದ ಸೌಂದರ್ಯ ಅಲ್ಲಿನ ಪ್ರಕ್ರತಿಯಷ್ಟೇ ಚೆಲುವು . ಉಗ್ರರ ಪರಕಾಷ್ಟೇಯ ಕಾಲದಲ್ಲಿ ಕಾಶ್ಮೀರ ಕಣಿವೆಯಲ್ಲಿ ಇಸ್ಲಾಂ ಕಾನೂನಿನ ಅಡಿಯಲ್ಲಿ ಮದ್ಯದ ಅಂಗಡಿಗಳು ಮುಚ್ಚಿದವು . ಈಗಲೂ ಕೂಡ ಒಂದೆರಡು ಅಂಗಡಿಗಳು ಇರಬಹುದು ಅಷ್ಟೇ ಇಲ್ಲಿನ ಯುವಕರು ಮದ್ಯ ಕುಡಿಯುವುದು ಕಡಿಮೆ ಆದರೆ ಚಳಿ ಎಂಬ ಕಾರಣದಿಂದ ಇಲ್ಲಿನ ಯುವಕರು ಅತಿಯಾಗಿ ಸಿಗರೆಟ ಸೇದುತ್ತಾರೆ .
೧೫ ವರ್ಷದ ಹಿಂದೆ ಶ್ರೀನಗರದಲ್ಲಿ ಕಾಫೀ ಕುಡಿಯುವುದೆಂದರೆ ಭಾರತದ ಜೊತೆ ಗುರುತಿಸಿಕೊಂದಂತೆ ಎಂದು ಹೇಳುತ್ತಿದ್ದರಂತೆ . ಆದರೆ ಈಗ ಲಾಲ್ ಚೌಕ್ ಹತ್ತಿರವೇ ಕೆಫೆ ಅರೇಬಿಯಾ ಹಾಗು ಕೆಫೆ ಕಾಫೀ ಡೇ ತೆರೆದುಕೊಂಡಿವೆ . ಜೋಡಿಗಳು ಓಡಾಡುವುದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ನಿಷಿದ್ಧ ಎಂಬ ದಿನಗಳು ದೂರವಾಗಿ ಕಾಫೀ ಶಾಪ್ ಗಳು ಹಾಗು ಬ್ಯಾಕ್ ಗ್ರೌಂಡ್ ನಲ್ಲಿ ಪಾಶ್ಚಿಮಾತ್ಯ ಸಂಗೀತ ದ ಗುಂಗಿನಲ್ಲಿ ಇಲ್ಲಿನ ಯುವಕ ಯುವತಿಯರು ನಿಧಾನವಾಗಿ ಕಾಣಿಸಿ ಕೊಳ್ಳತೊದಗಿದ್ದಾರೆ .
ಇವೆಲ್ಲವೂ ಹೊಸ ಶ್ರೀನಗರದ ಕಥೆಯಾದರೆ ಓಲ್ಡ್ ಶ್ರೀ ನಗರ ಮಾತ್ರ ಇನ್ನುವರೆಗೂ ಕೂಡ ಪ್ರತ್ಯೇಕತೆಯ ಕೇಂದ್ರ ಸ್ಥಾನ . ನೀವು ಒಂದು ಸಲ ಒಳ ಪ್ರವೇಶಿಸಿದರೆ ''ಗೋ ಇಂಡಿಯಾ ಗೋ ''ಎಂಬ ಗೋಡೆ ಬರಹಗಳು ಉರ್ದುವಿನಲ್ಲಿ ಬರೆದ ಭಾರತ ವಿರೋಧಿ ಪೋಸ್ಟರ್ ಗಳು ಕಾಣ ಸಿಗುತ್ತವೆ . ಇಲ್ಲಿ ಮಾತ್ರ ಗಲ್ಲಿ ಗಲ್ಲಿಗಳಲ್ಲಿ ಸೇನೆಯ ಯೋಧರು ಕಾಣ ಸಿಗುತ್ತಾರೆ . ಕಳೆದ ೫ ತಿಂಗಳಲ್ಲಿ ಓಲ್ಡ್ ಸಿಟಿ ಹತ್ತಿರದ ಬೆಮಿನಾ ಬಟಮಲೂ ಪ್ರದೇಶಗಳಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಯ ಮೇಲೆ ೧೦ ದಾಳಿಗಳು ನಡೆದಿವೆ . ಪ್ರಧಾನಿ ಭೇಟಿಯ ಹಿಂದಿನ ದಿನ ನಡೆದ ದಾಳಿಯು ಕೂಡ ನಡೆದಿದ್ದು ಓಲ್ಡ್ ಸಿಟಿ ಗೆ ಹತ್ತಿಕೊಂಡೆ ಇರುವ ಹಯ್ದರ್ಪೋರಾ ಬಾರಾಮುಲ್ಲಾ ಗೆ ಹೋಗುವ ರಸ್ತೆಯಲ್ಲಿ . ಆಶ್ಚರ್ಯವೆಂದರೆ ದಾಳಿ ನಡೆಸಿದ ನಂತರ ಬೈಕ್ ನಲ್ಲಿ ಪರಾರಿಯಾದ ಉಗ್ರರು ಸಿಕ್ಕಿಲ್ಲ . ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋದ ಆಟೋ ಚಾಲಕ ಶಾಹಿದ್ ಹೇಳುವ ಪ್ರಕಾರ ''ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಮುಜಾಹಿದೀನ್ ಗಳನ್ನೂ ಓಲ್ಡ್ ಸಿಟಿ ಯಾ ಜನ ಅಳಿಯನನ್ನು ನೋಡಿಕೊಂದಂತೆ ಸತ್ಕರಿಸುತ್ತಾರೆ . ಶ್ರೀ ನಗರ ದಲ್ಲಿ ಆಗಾಗ ''ಅಜಾದಿ ''ಎಂದು ಹೇಳುತ್ತಾ ಸೇನೆಯ ಮೇಲೆ ಕಲ್ಲು ಹೊಡೆದು ನಂತರ ಸೇನೆಯ ಜವಾನರು ಪ್ರತಿ ದಾಳಿ ನಡೆಸಿದಾಗ ಮಾನವ ಹಕ್ಕು ಎಂದು ಬೊಬ್ಬೆ ಹೊಡೆಯುವವರು ಇಲ್ಲಿನ ಭ್ರಮಿತ ಯುವಕರು ''. ಆದರೆ ಓಲ್ಡ್ ಸಿಟಿ ಯಲ್ಲೇ ವಾಸಿಸುವ ಚಹಾ ಅಂಗಡಿ ನಡೆಸುವ ಇರ್ಫಾನ್ ಭಟ್ಟ್ ಕೇಳುವ ಪ್ರಕಾರ ''ದೆಹಲಿಯಲ್ಲಿ ಅತ್ಯಾಚಾರದ ಘಟನೆ ಖಂಡಿಸಿ ಯುವಕ ಯುವತಿಯರು ಬೀದಿಗೆ ಇಳಿದು ಕಲ್ಲು ಗಳಿಂದ ಅಟ್ಯಾಕ್ ಮಾಡಿದಾಗ ಬರೀ ನೀರು ಹೊಡೆಯುವ ನಿಮ್ಮ ಸರ್ಕಾರ ನಮ್ಮ ಯುವಕರು ಬೀದಿಗೆ ಇಳಿದ ತಕ್ಷಣ ಬಂದೂಕು ದಾಳಿ ನಡೆಸುವುದು ಏಕೆ ? ಎಂದು ಪ್ರಶ್ನಿಸುತ್ತಾರೆ .
ಇದೆ ಓಲ್ಡ್ ಸಿಟಿ ಯಲ್ಲಿ ಕಾಶ್ಮೀರಿ ಪಂಡಿತರ ಮೂರು ಗಲ್ಲಿಗಳಿದ್ದವು . ಆದರೆ ಈಗ ಓಲ್ಡ್ ಸಿಟಿ ಯಲ್ಲಿ ಯಾವೊಬ್ಬ ಹಿಂದುವೂ ಇಲ್ಲ . ಹಿಂದೂಗಳ ಸಣ್ಣ ಸಣ್ಣ ಮಂದಿರಗಳು ಕೂಡ ಇಲ್ಲ . ಇಲ್ಲಿ ಈಗ ಏನಿದ್ದರು ಇಸ್ಲಾಂ ರಾಜ್ಯ . ಒಂದು ಕಾಲದಲ್ಲಿ ಸನಾತನ ಹಿಂದೂ ಸಂಸ್ಕೃತಿಗೆ ಜನ್ಮ್ ನೀಡಿದ ಪೋಷಿಸಿದ ಸಿಂಧು ತಟದಲ್ಲಿ ಈಗ ಹಿಂದುಗಳೇ ಇಲ್ಲ ಎನ್ನುವುದು ವಿಪರ್ಯಾಸ . ಕಾಶ್ಮೀರದಲ್ಲಿ ಆರಂಭವಾದ ಪಾಕ್ ಪ್ರಾಯೋಜಿತ ಉಗ್ರವಾದಕ್ಕೆ ಬಲಿಯಾಗಿ ತಮ್ಮ ಜನ್ಮ ಕರ್ಮ ಭೂಮಿಯಿಂದ ದೂರ ಬಂದು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕುತ್ತಿರುವವರು ಕಾಶ್ಮೀರಿ ಪಂಡಿತರು . ಶ್ರೀನಗರ ದಿಂದ ಗಂಡೆರ್ ಬಾಲ ಗೆ ಹೋಗುವ ದಾರಿಯಲ್ಲಿ ಬೀಳುವ ಪಂಡಿತರ ಆರಾಧ್ಯ ದೈವತೆ ಖೀರ್ ಭವಾನಿ ಮಂದಿರಕ್ಕೆ ಹೋದರೆ ನಿಜಕ್ಕೂ ಪಂಡಿತರ ಪರಿಸ್ಥಿತಿ ಅರ್ಥವಾಗುತ್ತದೆ . ಮಂದಿರದ ಸುತ್ತಲು ಮುಸ್ಲಿಂ ಕುಟುಂಬಗಳು ಆದರೆ ಅಲ್ಲಿ ಪೂಜೆ ನಡೆಸುವ ಹಿಂದೂ ಅರ್ಚಕರ ಕುಟುಂಬಗಳು ಮಂದಿರದ ಪ್ರಾಂಗಣದ ಒಳಗೆ ಬಿ ಎಸ್ ಎಫ್ ಭದ್ರತೆಯಲ್ಲಿ ಬದುಕುವ ಅನಿವಾರ್ಯತೆ . ಇಲ್ಲಿನ ಸ್ಥಳೀಯ ವಯಸ್ಕ ಮುಸ್ಲಿಮರೆನೋ ಪಂಡಿತರು ಮತ್ತೆ ಕಣಿವೆಗೆ ಬಂದು ನೆಲೆಸಲಿ ಎಂದು ಹೇಳುತ್ತಾರೆ . ಆದರೆ ತಮ್ಮ ಜೀವಿತಾವಧಿಯಲ್ಲಿ ಉಗ್ರರು ನಡೆಸಿದ ಅಟ್ಟ ಹಾಸವನ್ನು ಕಣ್ಣ ಮುಂದೆ ನೋಡಿರುವ ಪಂಡಿತರು ವರ್ಷಕ್ಕೊಮ್ಮೆ ಭವಾನಿ ದರ್ಶನಕ್ಕೆ ಬರುತ್ತಾರೆ ಆದರೆ ವಾಪಾಸ್ ಬಂದು ನೆಲೆಸಲು ತಯಾರಿಲ್ಲ .
ನಾವು ಜಮ್ಮು ಗೆ ಹೋದಾಗ ಸಿಕ್ಕಿದ್ದ ಕಾಶ್ಮೀರಿ ಪಂಡಿತರಾಗಿರುವ ಸುಪ್ರಿಂ ಕೋರ್ಟ್ ಹಿರಿಯ ವಕೀಲ ರೊಬ್ಬರು 'ನಮಗೆ ಕಾಶ್ಮೀರದ ಬಗ್ಗೆ ಸಹಜ ಸೆಳೆತವಿದೆ . ಆದರೆ ಅಲ್ಲಿ ಹೋಗಿ ನೆಲೆಸಲು ಈಗ ಸಾಧ್ಯವಿಲ್ಲ . ನಮ್ಮ ಮಕ್ಕಳಿಗಂತೂ ಕಾಶ್ಮೀರ ಬೇಡವೇ ಎನಿಸಿಬಿಟ್ಟಿದೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಷ್ಟ ಪಟ್ಟು ಕೊಟ್ಟಿದ್ದೇವೆ ಮತ್ತೆ ಅಲ್ಲಿ ಹೋಗಿ ನರಕದಲ್ಲಿ ಬದುಕುವುದು ಏಕೆ ? ಈಗ ಕಾಶ್ಮೀರಿ ಮುಸ್ಲಿಮರು ವಾಪಾಸ್ ಬನ್ನಿ ಎನ್ನುತ್ತಾರೆ ಆದರೆ ೨೪ ವರ್ಷಗಳ ಹಿಂದೆ ನಮ್ಮ ಮನೆಗಳನ್ನು ಉಗ್ರರು ಸುಡುತ್ತಿದ್ದಾಗ ಇವರು ಯಾರು ಕೂಡ ನಮ್ಮ ನೆರವಿದೆ ಬಂದಿಲ್ಲ ಎನ್ನುವುದನ್ನು ನಾವು ನೆನಪು ಹಾರುವುದು ಹೇಗೆ ? ಹಾಗು ಆಗ ನಮ್ಮ ಮನೆಗಳನ್ನು ಅಲ್ಲಿನ ಮುಸ್ಲಿಮರು ಜಬರದಸ್ತಿ ಮಾಡಿ ಕಡಿಮೆ ಬೆಲೆಯಲ್ಲಿ ಕೊಂಡು ಕೊಂಡಿದ್ದಾರೆ ಈಗ ನಮಗೆ ಅಲ್ಲಿ ಏನಿದೆ? ಎಂದು ಖಾರವಾಗಿ ಆದರೆ ದುಖ ಭರಿತರಾಗಿ ಕೇಳುತ್ತಾರೆ . ತುಲ ಮೂಲ ನಲ್ಲಿ ಖೇರ್ ಭವಾನಿ ಶ್ರೀ ನಗರ್ ದಲ್ಲಿ ಶಂಕರಾಚಾರ್ಯ ಲಾಲ್ ಚೌಕ್ ನಲ್ಲಿ ಹನುಮಾನ್ ಮಂದಿರ ಮಟ್ಟನ್ ನಲ್ಲಿ ಶಿವ ಮಂದಿರ ಹೀಗೆ ಕೆಲವು ಹಿಂದೂ ಪಳೆಯುಳಿಕೆಗಳು ಇನ್ನು ಕೂಡ ಉಳಿದುಕೊಂಡಿವೆ .
ಕಳೆದ ವಾರವಷ್ಟೇ ಅಮರನಾಥ್ ಯಾತ್ರೆ ಆರಂಭವಾಗಿದ್ದು ಉತ್ತರಖಂಡದ ಘಟನೆಗಳ ನಂತರವೂ ಕೂಡ ಹಿಮ ಲಿಂಗದ ದರ್ಶನಕ್ಕೆ ಸುಮಾರು ೪ ಲಕ್ಷ್ಯ ಹಿಂದೂಗಳು ಆಗಮಿಸುವ ನಿರೀಕ್ಷೆಯಿದೆ . ಪಾಕಿಸ್ತಾನದಲ್ಲಿ ಕುಳಿತಿರುವ ಉಗ್ರರು ಅಮರನಾಥ್ ಯಾತ್ರೆಯ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದರು ಕೂಡ ಸ್ಥಳೀಯ ಜನರಿಗೆ ಇದು ಮಾನ್ಯವಿಲ್ಲ . ೪ ಲಕ್ಷ್ಯ ಯಾತ್ರಿಕರು ಇಲ್ಲಿಗೆ ಬಂದರೆ ತಾನೇ ನಮಗೆ ಮನೆ ನಡೆಯುವುದು ಎನ್ನುತ್ತಾರೆ ಸ್ಥಳೀಯ ಜನ .
ನಮ್ಮನ್ನು ಬಾರಾಮುಲ್ಲ ಹಾಗು ಗುಲಮಾರ್ಗ್ ಗೆ ಕರೆದುಕೊಂಡು ಹೋಗಿದ್ದ ಸುಮಾರು ೫೫ ವರ್ಷ ವಯಸ್ಸಿನ ಅಬ್ದುಲ್ ಮಜಿದ್ ಹೇಳುವ ಪ್ರಕಾರ ''ಕಾಶ್ಮೀರದ ದೊಡ್ಡ ಶತ್ರು ಪಾಕಿಸ್ತಾನ ಎನ್ನುವುದು ನಮ್ಮ ಯುವಕರಿಗೆ ಅರ್ಥವಾದಾಗ ಮಾತ್ರ ಕಾಶ್ಮೀರ ಸಮಸ್ಯೆ ನಿಧಾನವಾಗಿ ಕೊನೆಗಾಣುತ್ತದೆ . ಶಿಕ್ಷಿತ ಯುವಕರಿಗೆ ಇದು ಅರ್ಥವಾಗುತ್ತಿದೆ ಆದರೆ ಸೋಪೋರ್ ನಂತಹ ತೀರ ಹಿಂದುಳಿದ ಪ್ರದೇಶಗಳಲ್ಲಿರುವ ಅಶಿಕ್ಷಿತ ಯುವಕರಿಗೆ ಇದು ಅರ್ಥವಾಗುತ್ತಿಲ್ಲ . ಆದರೆ ಇಲ್ಲಿರುವ ದೊಡ್ಡ ಸಮಸ್ಯೆ ಚೆನ್ನಾಗಿ ಕಲಿತರು ಕೂಡ ಕಾಶ್ಮಿರಿಗರು ಎನ್ನುವ ಕಾರಣಕ್ಕಾಗಿ ದೆಹಲಿ ಮುಂಬೈ ನಲ್ಲಿ ಸಂದೇಹದಿಂದಾಗಿ ನೌಕರಿ ಸಿಗುತ್ತಿಲ್ಲ . ಇಲ್ಲಿ ಪ್ರವಾಸೋದ್ಯಮ ಬಿಟ್ಟು ಬೇರೆ ನೌಕರಿಗಳಿಲ್ಲ ಇದೆ ಕಾರಣದಿಂದ ನಮ್ಮ ಯುವಕರು ಖಾಲಿ ಕುಳಿತು ಕುಳಿತು ಬೇಸತ್ತು ಅಜಾದಿ ಎಂದು ಹೊರಡುತ್ತಾರೆ ಎಂದು ಹೇಳುವ ಮಜಿದ್ ' ಕಾಶ್ಮೀರ ಭಾರತದಿಂದ ದೂರವಾದರು ಕೂಡ ಪಾಕಿಸ್ತಾನ ಮತ್ತು ಚೀನಾ ಕಬಂಧ ಬಾಹುಗಳಲ್ಲಿ ಸೇರಬೇಕು ಎಂಬ ಸಿಂಪಲ್ ವಿಷಯ ನಮ್ಮವರಿಗೆ ಅರ್ಥವಾಗಿಲ್ಲ . ಶೇಖ್ ಅಬ್ದುಲ್ಲ ರಿಗೆ ಇದು ಗೊತ್ತಿತ್ತು ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ಹೇಳುತ್ತಾರೆ .
ಕೆಲವೇ ದಿನಗಳ ಹಿಂದೆ ಲಡಾಕ್ ಗೆ ಹೋಗುವ ಮಾರ್ಗದಲ್ಲಿರುವ ೧೨ ಸಾವಿರ ಫೀಟ್ ಎತ್ತರದಲ್ಲಿರುವ ಜೋಜಿಲಾ ಪಾಸ ನ ಬಂಡೆಯ ಮೇಲೆ ''ವೆಲ್ ಕಂ ಟು ತಾಲಿಬಾನ್ ''ಎಂದು ಬರೆಯಲಾಗಿತ್ತಂತೆ . ೨ ೦ ೧ ೪ ರಲ್ಲಿ ಅಪಘಾನಿಸ್ತಾನದಿಂದ ಅಮೇರಿಕನ್ ಪಡೆಗಳು ವಾಪಾಸ್ ತೆರಳಿದ ಮೇಲೆ ಅಲ್ಲಿನ ತಾಲಿಬಾನ್ ಮುಜಾಹಿದಿನಗಳು ಕಾಶ್ಮೀರಕ್ಕೆ ಬರುತ್ತಾರೆ ಎಂಬುದು ಇದರ ಅರ್ಥ . ಕಾಶ್ಮೀರ ದಲ್ಲಿ ಈಗ ಎಲ್ಲೆಡೆ ಇದೆ ಚರ್ಚೆ .'' ಸ್ವರ್ಗವೆಲ್ಲಿಯಾದರು ಇದ್ದರೆ ಅದು ಕಾಶ್ಮಿರನಲ್ಲೇ ಇದೆ ''ಎಂದು ಸೂಫಿ ಕವಿಗಳು ಹೊಗಳಿದ ನಾಡು ನಿಧಾನವಾಗಿ ಬದಲಾಗುವ ಲಕ್ಷಣಗಳನ್ನು ತೋರಿಸುತ್ತಿದೆ .




ಒಳ್ಳೆಯ ಲೇಖನ
ReplyDeleteಒಳ್ಳೆಯ ಲೇಖನ
ReplyDeleteGood ..Natu
ReplyDeleteDear Prashanth
ReplyDeleteYour political analysis are fantastic. i am following your analysis in Kannada Prabha and Suvarna News. You narrate issues very well.
Thanks for giving insights on critical issues.
all the best